ಚಟುವಟಿಕೆಗಳು

ಕರ್ನಾಟಕ ಸರ್ಕಾರದ ಸಚಿವಾಲಯವು ರಾಜ್ಯದ ಸಂಪೂರ್ಣ ಆಡಳಿತದ ಕೇಂದ್ರಬಿಂದುವಾಗಿರುವುದರಿಂದ, ಇಲ್ಲಿಯ ಕಡತಗಳು ಸಮಗ್ರ ಆಡಳಿತದ ಪ್ರತಿಬಿಂಬವಾಗಿದ್ದು, ಇತಿಹಾಸಕಾರರಿಗೆ ಮತ್ತು ವಿದ್ವಾಂಸರಿಗೆ ಅತ್ಯಾವಶ್ಯಕವಾದ ದಾಖಲಾತಿಗಳಾಗಿರುವುದರಿಂದ ಅವುಗಳನ್ನು ಎ, ಬಿ ಮತ್ತು ಸಿ ವರ್ಗೀಕರಣದಲ್ಲಿ ವಿಂಗಡಿಸಿ ಕಾಪಾಡುವುದು.

ಸಚಿವಾಲಯದ್ದಲ್ಲದೆ, ಅತ್ಯಂತ ಪ್ರಮುಖವಾದ ಮತ್ತು ಶಾಶ್ವತವಾಗಿ ಇಡಬೇಕಾದಂತಹ ಮೈಸೂರು, ಕೆಳದಿ, ಹಳೆ ನಗರ, ವಿಜಯನಗರ, ಕೊಡಗು ಇತ್ಯಾದಿ ರಾಜರುಗಳ ಮತ್ತು ಜಿಲ್ಲಾ ಕಂದಾಯ ಇಲಾಖೆ ಮುಂತಾದವುಗಳಲ್ಲಿರುವ ಸಾರ್ವಜನಿಕ ದಾಖಲಾತಿಗಳನ್ನು ಸಂರಕ್ಷಿಸುವುದು.

ಸಚಿವಾಲಯದ ವಿವಿಧ ಇಲಾಖೆಗಳಿಂದ ಸ್ವೀಕೃತವಾದ ಕಡತಗಳನ್ನು 1. ವರ್ತಮಾನದ ಕಡತಗಳು; 2. 30 ವರ್ಷ ಹಳೆ ಕಡತಗಳು ಎಂಬುದಾಗಿ ವರ್ಗೀಕರಿಸಿ ಇಲಾಖೆಯ 'ಸಾರ್ವತ್ರಿಕ ಶಾಖೆ'ಯಲ್ಲಿ ಅವುಗಳನ್ನು ನಿರ್ವಹಿಸಿ, ಅವುಗಳಿಗೆ ಸೂಚಿಯನ್ನು ತಯಾರಿಸಿ, ಆಯಾಯಾ ಇಲಾಖೆಗಳಿಗೆ ಬೇಕಾಗುವ ಕಡತಗಳನ್ನು ಕೋರಿಕೆ ಮೇರೆಗೆ ಒದಗಿಸುವುದು.

ಕರ್ನಾಟಕದ ಉಚ್ಛ ನ್ಯಾಯಾಲಯ, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಮುಂತಾದ ಸ್ವಾಯತ್ತ ಸಂಸ್ಥೆಗಳಿಂದ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳಿಂದ ಐತಿಹಾಸಿಕ ಮೌಲ್ಯವಿರುವ ದಾಖಲಾತಿಗಳನ್ನು ಅವರುಗಳ ಸಹಕಾರ ಮತ್ತು ಅನುಮತಿಯಿಂದ ಪಡೆದು ಸಂರಕ್ಷಿಸುವುದು.

ಸರ್ಕಾರವು ಕಾಲಕಾಲಕ್ಕೆ ನೇಮಿಸುವ ಸಮಿತಿ/ಕಮಿಷನ್‍ಗಳು ಹೊರಡಿಸುವ ವರದಿಗಳನ್ನು ಮತ್ತು ದಾಖಲಾತಿಗಳನ್ನು ಸ್ವೀಕರಿಸಿ ಸಂರಕ್ಷಿಸುವುದು.

ಹಳೇಕಾಲದಿಂದ ಬಂದಿರುವ ಮಠಗಳಲ್ಲಿರುವ, ಪಾಳೇಗಾರರು ಮತ್ತು ರಾಜವಂಶದ ಕುಟುಂಬಗಳಲ್ಲಿರುವ ಮತ್ತು ಸಮಾಜದ ಏಳಿಗೆಗಾಗಿ ದುಡಿದ ಮಹನೀಯರುಗಳಲ್ಲಿರುವ ಐತಿಹಾಸಿಕ ಮೌಲ್ಯದ ದಾಖಲಾತಿಗಳ ಪರಿವೀಕ್ಷಣೆ ಮತ್ತು ಅವರುಗಳ ಸಹಕಾರದಿಂದ ಅವುಗಳನ್ನು ನಿರ್ದೇಶನಾಲಯದ ವಶಕ್ಕೆ ತೆಗೆದುಕೊಂಡು ಕಾಪಾಡುವುದು.

ಸರ್ಕಾರದಿಂದ ಪ್ರಕಟವಾಗುವ ವರದಿಗಳು, ಬ್ಲೂ ಪುಸ್ತಕಗಳು, ಗೆಝೆಟ್‍ಗಳು ಮತ್ತು ಇತರೆ ಪ್ರಕಟಣೆಗಳನ್ನು ಪಡೆದು ಸಂರಕ್ಷಿಸುವುದು ಮತ್ತು ಎಲ್ಲಾ ಕಾಲದಲ್ಲೂ ಅವುಗಳನ್ನು ಸಂಶೋಧಕರಿಗೆ ಮತ್ತು ಅವಶ್ಯಕವಿರುವವರಿಗೆ ಒದಗಿಸುವುದು.

ಸರ್ಕಾರದ ವಿವಿಧ ಇಲಾಖೆಗಳು ಆಗಿಂದಾಗ್ಗೆ ಹೊರಡಿಸುವ ಸೂಚನೆ, ಆದೇಶ, ಸುತ್ತೋಲೆ ಇತ್ಯಾದಿಗಳ ಪ್ರತಿಗಳನ್ನು ಆಯಾಯಾ ಇಲಾಖೆಗಳಿಂದ ಪಡೆದು ಅವುಗಳನ್ನು ಅವಶ್ಯಕವಿರುವವರಿಗೆ ಒದಗಿಸುವುದು.

ಸಂಶೋಧಕರಿಗೆ ಮತ್ತು ಸರ್ಕಾರದ ಇಲಾಖೆಗಳಿಗೆ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಚರಿತ್ರೆಯ ಬಗ್ಗೆ, ಅದರಲ್ಲೂ ಕರ್ನಾಟಕದ ಇತಿಹಾಸದ ಬಗ್ಗೆ, ಸಂಶೋಧನೆ ನಡೆಸಲು ಅನುಕೂಲವಾಗುವಂತೆ ಉತ್ತಮ ಪುಸ್ತಕಗಳನ್ನು ಹಾಗೂ ಪ್ರಕಟಣೆಗಳನ್ನು ಒಳಗೊಂಡಂತಹ ಉತ್ತಮ ಮಟ್ಟದ 'ಪತ್ರಾಗಾರ ಗ್ರಂಥಾಲಯ'ವನ್ನು ನಿರ್ವಹಿಸುವುದು.

ಪತ್ರಾಗಾರದ ದಾಖಲೆಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಮತ್ತು ಅವುಗಳ ಸಂರಕ್ಷಣೆ, ಬಳಕೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಪತ್ರಾಗಾರ ಪ್ರದರ್ಶನ, ಸೆಮಿನಾರ್ ಮತ್ತು ಚರ್ಚಾಕೂಟ ಮುಂತಾದವುಗಳನ್ನು ಏರ್ಪಡಿಸುವುದು.

ರಾಷ್ಟ್ರೀಯ ಸಂಸ್ಥೆಗಳಾದ ಭಾರತ ಇತಿಹಾಸ ಕಾಂಗ್ರೆಸ್, ದಕ್ಷಿಣ ಭಾರತ ಇತಿಹಾಸ ಕಾಂಗ್ರೆಸ್, ಕರ್ನಾಟಕ ಇತಿಹಾಸ ಕಾಂಗ್ರೆಸ್ ಮತ್ತು ಅಂತರರಾಷ್ಟ್ರೀಯ ಸಂಸ್ಥೆಯಾದ ದಕ್ಷಿಣ-ಪೂರ್ವ ಏಷಿಯಾ ಕಾಂಗ್ರೆಸ್‍ಗಳು ಏರ್ಪಡಿಸುವ ಸಮ್ಮೇಳನದಲ್ಲಿ ಭಾಗವಹಿಸುವುದು.

ಈ ನಿರ್ದೇಶನಾಲಯವು, ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವೆನಿಸಿದ, 'ಧ್ವನಿ ಇತಿಹಾಸ' ಎಂಬ ಹೊಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಸೇನೆಯ ಮಹಾದಂಡನಾಯಕರು, ರಾಜಕೀಯ ಧುರೀಣರು ಮತ್ತಿತರರ ಧ್ವನಿಯನ್ನು ಆಡಿಯೋ/ವೀಡಿಯೋ ರಿಕಾರ್ಡಿಂಗ್ ಮಾಡಿ ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲಾಗುತ್ತಿದೆ.

Free HTML5 Bootstrap Template